ತುಮಕೂರು: ತಂತ್ರಜ್ಞಾನ ಮತ್ತು ಸೃಜನಶೀಲತೆ ಜತೆಯಾದರೆ ಎಂತಹ ಅದ್ಭುತವನ್ನಾದರೂ ಸೃಷ್ಟಿಸಬಹುದು ಎಂಬುದನ್ನು ತುಮಕೂರಿನ ಯುವತಿ ಬೃಂದಾ ಎ. ಎನ್. ಸಾಬೀತುಪಡಿಸಿದ್ದಾರೆ. ಕೇವಲ 4 ನಿಮಿಷಗಳ ಅಲ್ಪಾವಧಿಯಲ್ಲಿ ಬರೋಬ್ಬರಿ 277 ಶಾಲಾ ವಿದ್ಯಾರ್ಥಿಗಳ ಛಾಯಾಚಿತ್ರಗಳನ್ನು ತಮ್ಮ ಮೊಬೈಲ್ ಕ್ಯಾಮೆರಾ ಮೂಲಕ ಸೆರೆಹಿಡಿದು, ಪ್ರತಿಷ್ಠಿತ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ‘ಐಬಿಆರ್ ಅಚೀವರ್’ ಆಗಿ ಸ್ಥಾನ ಪಡೆದುಕೊಂಡಿದ್ದಾರೆ.
ಶಾಲೆಯ ಆವರಣದ ಹೊರಗಿದ್ದ 277 ವಿದ್ಯಾರ್ಥಿಗಳ ನೈಜ ಕ್ಷಣಗಳನ್ನು ಯಾವುದೇ ಪೂರ್ವಸಿದ್ಧತೆಯಿಲ್ಲದೆ, ಅಪ್ರತಿಮ ವೇಗ, ತೀಕ್ಷ್ಣ ವೀಕ್ಷಣೆ ಹಾಗೂ ಏಕಾಗ್ರತೆಯಿಂದ ಮೊಬೈಲ್ ಫೋನ್ ಮೂಲಕ ಸೆರೆಹಿಡಿದಿದ್ದಾರೆ. ಇವರ ಈ ಮೊಬೈಲ್ ಛಾಯಾಗ್ರಹಣ ಕೌಶಲ್ಯ ಮತ್ತು ವೇಗವನ್ನು ಗುರುತಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು, ಅಧಿಕೃತವಾಗಿ ಇವರ ಹೆಸರನ್ನು ದಾಖಲೆಗಳ ಪಟ್ಟಿಗೆ ಸೇರಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದೆ.
ಬೃಂದಾ ಅವರ ಈ ಅನನ್ಯ ಸಾಧನೆಯ ಹಿಂದೆ ಅವರ ತಾಯಿ ದಿವಂಗತ ಮಂಜುಳಾ ಅವರ ಪ್ರೋತ್ಸಾಹವಿದೆ. ಬಾಲ್ಯದಿಂದಲೇ ಛಾಯಾಗ್ರಹಣದ ಮೇಲೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಬೃಂದಾ ಅವರಿಗೆ, ತಮ್ಮ ಪ್ರತಿಭೆಯನ್ನು ಹೊರಜಗತ್ತಿಗೆ ಪ್ರದರ್ಶಿಸಲು ಮತ್ತು ದಾಖಲೆಗಾಗಿ ಅರ್ಜಿ ಸಲ್ಲಿಸಲು ತಾಯಿಯೇ ಸ್ಫೂರ್ತಿಯಾಗಿದ್ದರು.
ಬೃಂದಾ ಅವರು ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಎಸ್‌ಎಸ್‌ಎಲ್‌ಸಿ ಶಿಕ್ಷಣ ಪೂರೈಸಿದ್ದು, ನಂತರ ಪ್ಯಾರಾಮೆಡಿಕಲ್ ವ್ಯಾಸಂಗವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಕೇವಲ ಓದಿಗೆ ಸೀಮಿತವಾಗದೆ ಬಾಲ್ಯದಿಂದಲೂ ಛಾಯಾಗ್ರಹಣ, ವೀಡಿಯೋಗ್ರಫಿ, ವೀಡಿಯೋ ಎಡಿಟಿಂಗ್ ಹಾಗೂ ಚಿತ್ರಕಲೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.




