ಸಿಜೆಪಿಯನ್ನು ನಾವೆಂದಿಗೂ ಬೆಂಬಲಿಸಲ್ಲ : ಅಣ್ಣಾಮಲೈ ಸ್ಪಷ್ಟನೆ

annamalai-clarifies-no-support-to-cjp

annamalai-clarifies-no-support-to-cjp

ಚೆನ್ನೈ : ಚುನಾವಣಾ ಆಯೋಗದ ವಿರುದ್ಧ ಸಿಜೆಪಿ (cockroach janata party) ನಡೆಸಿದ ಪ್ರತಿಭಟನೆಯ ಮೇಲಿನ ಪೊಲೀಸ್ ಕ್ರಮವನ್ನು ಟೀಕಿಸಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, “ನಾವು ಯಾವುದೇ ಕಾರಣಕ್ಕೂ ಸಿಜೆಪಿಯನ್ನು ಬೆಂಬಲಿಸುವುದಿಲ್ಲ. ಅವರ ಕಾರ್ಯಸೂಚಿಯೇ ಬೇರೆ, ನಮ್ಮ ಗುರಿಯೇ ಬೇರೆ” ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ.

ಬಿಜೆಪಿಯಿಂದ ಹೊರಬಂದ ನಂತರ ತಾವು ಸ್ಥಾಪಿಸಿದ ಸಂಘಟನೆಯ ವೇದಿಕೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ ಎಂಬ ಕಾರಣಕ್ಕೆ ಪೊಲೀಸ್ ದಬ್ಬಾಳಿಕೆಯನ್ನು ಪ್ರಶ್ನಿಸಿದ್ದೇನೆಯೇ ಹೊರತು, ಸಿಜೆಪಿಯ ಅಜೆಂಡಾವನ್ನು ಬೆಂಬಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.

 “ನಾನು ದೇಶದ ಹಲವು ರಾಜ್ಯಗಳಲ್ಲಿ ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ದೇಶದ ಏಕತೆ ಮತ್ತು ಸಾರ್ವಭೌಮತ್ವದ ಅರಿವು ನನಗಿದೆ. ಆದ್ದರಿಂದ ಯಾರೂ ನನಗೆ ದೇಶಭಕ್ತಿಯ ಬಗ್ಗೆ ಉಪನ್ಯಾಸ ನೀಡುವ ಅಗತ್ಯವಿಲ್ಲ” ಎಂದು ತಮ್ಮನ್ನು ಟೀಕಿಸಿದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಸಿಜೆಪಿ ಕಾರ್ಯಕರ್ತರು ತಪ್ಪು ಮಾಡಿದ್ದರೆ ಸೇಡಿನ ರಾಜಕಾರಣ ಮಾಡುವ ಬದಲು ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು ಎಂದ ಅವರು, “ನಿಜವಾಗಿಯೂ ದೇಶದ ಸಾರ್ವಭೌಮತೆಗೆ ಧಕ್ಕೆ ಇದ್ದರೆ ನಿಮ್ಮ ಬಳಿ ಐಬಿ (IB), ರಾ (RAW) ನಂತಹ ತನಿಖಾ ಸಂಸ್ಥೆಗಳಿವೆ. ಸೂಕ್ತ ಸಾಕ್ಷ್ಯಗಳೊಂದಿಗೆ ಅವರನ್ನು ಜೈಲಿಗೆ ಹಾಕಿ. ಅದನ್ನು ಬಿಟ್ಟು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ಟ್ರೋಲ್ ಮಾಡುವ ಕೆಲಸ ಮಾಡಬೇಡಿ” ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ, ಅವರು ಸಮರ್ಥ ಪ್ರಧಾನಿ. ಆದರೆ, ಅವರನ್ನು ಬೆಂಬಲಿಸುತ್ತೇವೆ ಎಂಬ ಮಾತ್ರಕ್ಕೆ ಆಡಳಿತದಲ್ಲಿ ತಪ್ಪುಗಳು ಕಂಡಾಗ ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ, ತಪ್ಪನ್ನು ಮುಲಾಜಿಲ್ಲದೆ ಪ್ರಶ್ನಿಸುತ್ತೇವೆ ಎಂದು ಹೇಳಿದರು.

ದೆಹಲಿಯ ದಸರಾ ಉತ್ಸವದಲ್ಲಿ ಬಿಜೆಪಿ ಶಾಸಕ ಅಶೋಕ್ ಗೋಯೆಲ್ ನೇತೃತ್ವದಲ್ಲಿ ಜಿರಳೆ ಪ್ರತಿಕೃತಿ ದಹಿಸಿದ್ದನ್ನು ಉಲ್ಲೇಖಿಸಿದ ಅವರು, “ಬಿಜೆಪಿ ಸಿಜೆಪಿಯನ್ನು ಮಟ್ಟಹಾಕಲು ನೋಡುತ್ತಿದೆಯೋ ಅಥವಾ ಅದಕ್ಕೆ ಅನಗತ್ಯವಾಗಿ ರಾಷ್ಟ್ರಮಟ್ಟದಲ್ಲಿ ಉಚಿತ ಪ್ರಚಾರ ನೀಡುತ್ತಿದೆಯೋ ತಿಳಿಯುತ್ತಿಲ್ಲ. 12 ವರ್ಷಗಳ ಕಾಲ ಅಧಿಕಾರ ನಡೆಸಿದ ಮೇಲೂ ಪಕ್ಷ ಹೊಸ ಶತ್ರುಗಳನ್ನು ಹುಡುಕುತ್ತಿದೆ” ಎಂದು ಲೇವಡಿ ಮಾಡಿದರು.

Leave a Reply

Your email address will not be published. Required fields are marked *